Tuesday, August 18, 2020

ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸ | Tungabhadra Dam history.

Tungabhadra dam image







 ತುಂಗಭದ್ರಾ ಅಣೆಕಟ್ಟು ಈ ಹೆಸರು ಕೇಳಿದರೆ ಸಾಕು ಅದೆಷ್ಟೋ ಜನ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಕಾರಣ ಸುಮಾರು 150 ವರ್ಷಗಳಿಂದ ಬರಗಾಲದಿಂದ ಬರಡಾಗಿದ್ದ ಭೂಮಿಯು ಇಂದು ಹಚ್ಚ ಹಸಿರಿನ ನಾಡಾಗಿದೆ. 

            ಅದು 1876 ದಕ್ಷಿಣ ಭಾರತದಲ್ಲಿ ಭೀಕರ ಬರಗಾಲ ಎದುರಾಯಿತು, ಈ ಅವಧಿಯಲ್ಲಿ ಬಳ್ಳಾರಿ, ರಾಯಚೂರು,ಕರ್ನೂಲು ಕನಾ೯ಟಕ ಹಾಗೂ ಆಂಧ್ರಪ್ರದೇಶದ ಅನೇಕ ಜಿಲ್ಲೆಗಳು ಸೇರಿದಂತೆ ಮಳೆಯ ಅಭಾವದಿಂದ ಬೆಳೆ ನಾಶವಾಗಿ ಜನರಿಗೆ ಮತ್ತು ಜಾನುವಾರುಗಳಿಗೆ ಅನ್ನ ನೀರಿಲ್ಲದೆ ಜೀವಂತ ಅಸ್ಥಿಪಂಜರದಂತಾಗಿ ಪ್ರಾಣಬಿಟ್ಟವು. ಮಲೇರಿಯಾ, ಕಾಲರಾ, ಪ್ಲೇಗ್ ನಂತಹ ಮಹಾಮಾರಿ ರೋಗಗಳ ಕಾಟದಿಂದಾಗಿ ಸತ್ತ ಜನರಿಂದ ಊರು ಕೇರಿಗಳು ತುಂಬಿಹೋಗಿದ್ದವು. ಸತ್ತವರ ಸಂಸ್ಕಾರಕ್ಕೂ ಜನರಲ್ಲಿದೆ ನರಿ,ನಾಯಿ,ರಣಹದ್ದು,ಕಾಗೆಗಳಿಗೆ ಅದೆಷ್ಟೋ ಜನ ಆಹಾರವಾಗಿ ಹೋದರು. ಇಡೀ ದಕ್ಷಿಣ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಬರದಿಂದ ಅಳಿದು ಹೋಯಿತು ಎಂದರೆ ನೀವು ನಂಬಲೇಬೇಕು. 


       ಬ್ರಿಟಿಷರು ಬರ ಪರಿಹಾರಕ್ಕಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು ದುರ್ಬಲರು ಹಾಗೂ ಮಕ್ಕಳಿಗೆ ಉಚಿತ ಗಂಜಿ ನೀಡುವುದರ ಮೂಲಕ ಮಾನವೀಯತೆ ಮೆರೆದರು. ಈ ಬರಗಾಲದ ಪರಿಸ್ಥಿತಿಯನ್ನು ಕಣ್ಣಾರೆ ಕಂಡಂತಹ ಬ್ರಿಟಿಷ್ ನೀರಾವರಿ ತಜ್ಞ ಅರ್ಥರ್ ಕಾಟನ್ ಅವರು ಬಳ್ಳಾರಿ, ರಾಯಚೂರು, ಕರ್ನೂಲು, ಅನಂತಪುರ ಪ್ರಾಂತ್ಯದ ಜನರ ಬರವನ್ನು ಕಾಯಮ್ಮಾಗಿ ಅಳಿಸಿ ಆಗಬೇಕೆಂದರೆ ತುಂಗಭದ್ರ ನದಿಗೆ ಅಡ್ಡಲಾಗಿ ಒಂದು ಆಣೆಕಟ್ಟನ್ನು ಈಗಿನ ಹೊಸಪೇಟೆಯ ಪಕ್ಕದಲ್ಲಿ ನಿರ್ಮಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೆ ಬ್ರಿಟಿಷ್ ಸರ್ಕಾರ ಹಣಕಾಸಿನ ಕೊರತೆ ನೆಪದಲ್ಲಿ ಯೋಜನೆಯನ್ನು ಮುಂದಕ್ಕೆ ಹಾಕಿತು. 

ನಂತರ 1902 ರಲ್ಲಿ ಮದ್ರಾಸ್ ಸರ್ಕಾರದ ಮುಖ್ಯ ಇಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ಅವರು ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ನೀರಾವರಿ ಆಯೋಗಕ್ಕೆ ಸಲ್ಲಿಸಿದರು, ಆದರೆ ಅದು ಕೂಡಾ ಕಾರ್ಯರೂಪಕ್ಕೆ ಬರಲಿಲ್ಲ ನಂತರ ಬಂದ ಮುಖ್ಯ ಇಂಜಿನಿಯರ್ ಮೆಕೆಂಜಿ ಅವರು ಹೊಸಪೇಟೆಯ ಪಕ್ಕದಲ್ಲಿದ್ದ ಮಲ್ಲಾಪುರದ ಎರಡು ಗುಡ್ಡಗಳ ನಡುವೆ ಆಣೆಕಟ್ಟನ್ನು ನಿರ್ಮಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು ಆದರೆ ಹೈದರಾಬಾದ್ ನಿಜಾಮ್ ಸರ್ಕಾರದ ಅಧಿಕಾರಿಗಳು ಈ ನದಿಯ ಮೇಲೆ ನಮಗೂ ಹಕ್ಕಿದೆ ಮತ್ತು ಈ ಆಣೆಕಟ್ಟನ್ನು ನಮ್ಮ ಪ್ರದೇಶದಲ್ಲಿ ಮಾಡಬೇಕೆಂದು ಪಟ್ಟು ಹಿಡಿದರು. 

ಮುಂಬೈ ಪ್ರಾಂತ್ಯ ಸರ್ಕಾರ, ಮೈಸೂರು ರಾಜರ ಸರ್ಕಾರ, ಹೈದರಾಬಾದ್ ನಿಜಾಮ ಸರಕಾರ ಮತ್ತು ಮದ್ರಾಸ್ ಪ್ರಾಂತ್ಯ ಸರ್ಕಾರ ಈ ನಾಲ್ಕು ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಆಣೆಕಟ್ಟನ್ನು ನಿರ್ಮಿಸಬೇಕೆಂದು ಪಟ್ಟು ಹಿಡಿದಿದ್ದವು ಇವರುಗಳ ಕಚ್ಚಾಟದಿಂದಾಗಿ ಆಣೆಕಟ್ಟು ಕಟ್ಟುವ ಕೆಲಸ ಮೂಲೆಗುಂಪು ಆಗಿಹೋಗಿತ್ತು.

ಕೊನೆಗೆ 1940 ರಲ್ಲಿ ಮದ್ರಾಸ್ ಸರ್ಕಾರ ಮತ್ತೆ ಯೋಜನೆಯನ್ನು ಕೈಗೆತ್ತಿಕೊಂಡಿತು ಆಗಿನ ಮುಖ್ಯ ಎಂಜಿನಿಯರ್ ಆಗಿದ್ದ ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ವರದಿಯನ್ನು ಸಿದ್ಧಪಡಿಸಲು ಸೂಚಿಸಲಾಯಿತು, ಇದನ್ನು ತಿಳಿದು ಸುಮ್ಮನಿರದ ನಿಜಾಮರ ಸರ್ಕಾರ ಸಿಸಿ ದಲಾಲ್ ಎಂಬ ಇಂಜಿನಿಯರ್ ಅನ್ನು ನೇಮಿಸಿ ಪ್ರತ್ಯೇಕವಾಗಿ ವರದಿಯನ್ನು ಸಲ್ಲಿಸಿತು. ಈ ಎರಡು ವರದಿಗಳನ್ನು ಅಳೆದು ತೂಗಿ ನೋಡಿದ ಬ್ರಿಟಿಷ್ ಸರ್ಕಾರ ಕೊನೆಗೆ 1942ರಲ್ಲಿ ತಿರುಮಲೆ ಅಯ್ಯಂಗಾರ್ ನೀಡಿದ ವರದಿಯ ಅತ್ಯಂತ ಸೂಕ್ತವಾದುದು ಎಂದಿತು. 



ಈಗಿನ ಹೊಸಪೇಟೆಯ ಹತ್ತಿರ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಆರಂಭವಾಯಿತು.

 28ನೇ ಫೆಬ್ರುವರಿ 1945 ರಂದು ಹೈದ್ರಾಬಾದ್ ನಿಜಾಮ ಮದ್ರಾಸ್ ಸರಕಾರದ ಗವರ್ನರ್ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆಯನ್ನು ಉದ್ಘಾಟಿಸಿದರು. 

ಪ್ರಾರಂಭದಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು ಆದರೆ ನಿರ್ಮಾಣ ವಸ್ತುಗಳ ಬಳಕೆಯ ವಿವಾದ ,ನಿಜಾಮರ ಆಳ್ವಿಕೆಯ ಅಂತ್ಯ ,ಆಗತಾನೆ ದೇಶಕ್ಕೆ ಸ್ವಾತಂತ್ರ್ಯ , ಬದಲಾದ ಆಡಳಿತ ಮಂಡಳಿ ಇಗೆ ಅನೇಕ ಕಾರಣಗಳಿಂದ ಯೋಜನೆ ಕುಂಟುತ್ತ ಸಾಗಿತು. 

             ಕೆಲವು ದಿನಗಳ ನಂತರ ಸರ್ ಎಂ ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್ ಮಂಡಳಿಗೆ ಅಣೆಕಟ್ಟು ನಿರ್ಮಾಣದ ಮೇಲುಸ್ತುವಾರಿಯನ್ನು ವಹಿಸಲಾಯಿತು ಆಗ ಮತ್ತೆ ನಿರ್ಮಾಣದ ಕಾರ್ಯ ಭರದಿಂದ ಸಾಗಿತ್ತು. 

Tungabhadra dam construction, rare photos and videos. - hospet.online

ಅತ್ಯಾಧುನಿಕ ಯಂತ್ರಗಳ ಇಲ್ಲದೆ 340 ಕಿಲೋಮೀಟರ್ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ಕೇವಲ ಮಾನವ ಶಕ್ತಿ ಬಳಕೆಯಾಯಿತು ಎಂದರೆ ನೀವು ನಂಬಲೇಬೇಕು ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರುಗಟ್ಟಲೆ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದರು ಹೀಗೆ ಅನೇಕ ಕಠಿಣ ಸವಾಲುಗಳನ್ನು ಎದುರಿಸಿ 1953 ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. 

         ಈ ಅಣೆಕಟ್ಟಿನಿಂದಾಗಿ ಬರಡು ಭೂಮಿಯಾಗಿದ್ದ ಬಳ್ಳಾರಿ, ರಾಯಚೂರು, ಅನಂತಪುರ, ಕರ್ನೂಲು ಮಹೆಬೂಬುನಗರಗಳ ಸುಮಾರು 16 ಲಕ್ಷ ಎಕರೆ ಜಮೀನಿನಲ್ಲಿ ಭತ್ತ,ಕಬ್ಬು ಬೆಳೆಯಲಾಗುತ್ತಿದೆ. ಗಂಗಾವತಿ ,ಸಿರುಗುಪ್ಪ ,ಸಿಂಧನೂರು ಪ್ರದೇಶಗಳನ್ನು ಭತ್ತ ದ ಕಣಜವೇಂದು ಗುರುತಿಸಲಾಗಿದೆ. ಇಂದು ಇದೆ ಅಣೆಕಟ್ಟಿನ ಆಸರೆಯಿಂದ ಕಾರ್ಖಾನೆಗಳು ಅಕ್ಕಿ ಗಿರಣಿಗಳು ಹೀಗೆ ಅನೇಕ ಕೈಗಾರಿಕೆಗಳು ಜಿಲ್ಲೆಗಳಲ್ಲಿ ನೆಲೆಸಿವೆ ಮೀನುಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ಈ ಭಾಗದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧಿಸಿದೆ. ಸುಮಾರು ಒಂದು ಕೋಟಿಗೂ ಅಧಿಕ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

Dr. Thirumalai Iyengar | The main architecture of the Tungabhadra dam        

 ಈ ಸಮೃದ್ಧಿಗೆ ಕಾರಣರಾದ ತಿರುಮಲೆ ಅಯ್ಯಂಗಾರ್ ಅವರ ಸವಿನೆನಪಿಗಾಗಿ ಕೆಲ ರೈತರು ಸೇರಿ ಆಣೆಕಟ್ಟಿನ ಬಲದಂಡೆ ಮೇಲೆ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. 

No comments:

Post a Comment